ಗುರುವಾರ, ಜೂನ್ 12, 2014

ಕೂದಲೆಳೆಯಂತರದಲಿ ಸುಳಿದಾಡಿದರೇನು
ಎದುರುಬದರು ಗಂಟೆಗಳು ಕೂತರೇನು
ವರುಷಗಳ ಪರಿಚಯವಿದ್ದರೇನು
ಪ್ರೀತಿಯೇನು ನೀರೆ ಸಿಕ್ಕಲ್ಲೆಲ್ಲಾ ನುಗ್ಗಲಿಕ್ಕೆ?
ಅದು ತಾನಾಗೇ ಹುಟ್ಟಬೇಕು
ತಾನು ಮೆಚ್ಚುವವರಿಗೇ ಒಲಿಯಬೇಕು..!!

ಸೋಮವಾರ, ನವೆಂಬರ್ 19, 2012

ಮತ್ತೆ ಹುಟ್ಟಿ ಬರಲಿ ಶಂಕರನಾಗ್

ಎಷ್ಟೇ ಹೊದಿಕೆಗಳಿಂದ ಮೈ ಮುಚ್ಚಿಕೊಂಡಿದ್ದರೂ ಏನೋ ಮಿಸ್ಸಿಂಗ್ ಎನ್ನುವಷ್ಟು ಚಳಿ. ದಕ್ಷಿಣ  ಭಾರತದ ಕರಾವಳಿ ತೀರವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ 'ನೀಲಂ' ಚಂಡಮಾರುತದ ಪ್ರಭಾವ ಬಹಳ ಜೋರಾಗೇ ಇತ್ತು. ಗಂಟೆ 10 ಆದರೂ ಹಾಸಿಗೆಯಿಂದ ಏಳಲು ಮನಸ್ಸೇ ಇಲ್ಲ. ಹೊಟ್ಟೆ ಚುರ್ ಎಂದಾಗ ಬಲವಂತವಾಗಿ ಏಳಬೇಕಾಯಿತು. ಪಕ್ಕವೇ ಇದ್ದ ಶಾಲೆಯ ಮಕ್ಕಳಿಂದ '59' ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಮಳೆ ಚಳಿಯ ನಡುವೆ ನಡೆಯುತ್ತಿರುವ ಸದ್ದು ಕಿವಿಗಪ್ಪಳಿಸಿತು. ಈ ಬಾರಿಯ ರಾಜ್ಯೋತ್ಸವವನ್ನು ಒಬ್ಬ ಅಪ್ರತಿಮ, ಸಾಹಸಿ ಕನ್ನಡಿಗನ ಕುರಿತ ಲೇಖನದೊಂದಿಗೆ ಆಚರಿಸಬೇಕೆಂದು ಮುಂಚೆಯೇ ನಿರ್ಣಯಿಸಿದ್ದೆ. ಅದಕ್ಕಾಗಿ ಕೆಲ ವಾರಗಳ ಹಿಂದೆಯೇ ಅಂತರ್ಜಾಲದಲ್ಲಿ ಜಾಲಾಡಿದ್ದೆ. ಆಕಸ್ಮಾತಾಗಿ ಅನಂತನಾಗ್ ರು  ತಮ್ಮ ತಮ್ಮನ ಬಗ್ಗೆ ಬರೆದ "ನನ್ನ ತಮ್ಮ ಶಂಕರ" ಪುಸ್ತಕ ಕಣ್ಣಿಗೆ ಬಿದ್ದು, ಸಪ್ನ online ನಲ್ಲಿ ಕೊಂಡು, ಪುಸ್ತಕ ಬರುವ ದಿನಕ್ಕಾಗಿ ಕಾದಿದ್ದೆ. ಪುಸ್ತಕದಲ್ಲಿದ್ದ ವಿಷಯಗಳು ಲೇಖನ ಬರೆಯಲು ಇನ್ನಷ್ಟು ಉತ್ತೇಜಿಸಿತು.

1). ಹೌಸಿಂಗ್ ಪ್ರಾಜೆಕ್ಟ್ : prefrabricated sheets ಗಳ ಮೂಲಕ ಮನೆಗಳನ್ನು ಕಟ್ಟಬಹುದಾದ ವಿಧಾನ. ಸುಮಾರು ಐವತ್ತು
ವರ್ಷಗಳು ಬಾಳಬಹುದಾದ ಮನೆಗಳ ನಿರ್ಮಾಣ ಮತ್ತು ನಿರ್ಮಾಣಕ್ಕೆ ತಗಲುವ ವೆಚ್ಚ 1987 ರ ಅವಧಿಗೆ 45000/- ರೂಪಾಯಿಗಳು. ನಾಡಿನ ಹಾಗೂ ನಮ್ಮ ದೇಶದ ಬಡವರಿಗೆ ಅಗ್ಗದ ಮನೆಗಳನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷಿ ಯೋಜನೆ.
2). ಕಂಟ್ರಿ ಕ್ಲಬ್
3). ಮಕ್ಕಳಿಗಾಗಿ ನಂದಿಬೆಟ್ಟದ ತಪ್ಪಲಿನಲ್ಲಿ Amusement Park
4). ನಂದಿಬೆಟ್ಟಕ್ಕೆ rope-way
5). ಕರ್ನಾಟಕದ ಹೆಸರು ಹಾಗೂ ಖ್ಯಾತಿಯನ್ನು ಹೆಚ್ಚಿಸಲು ನಂದಿಬೆಟ್ಟದ ಮತ್ತೊಂದು ಪಕ್ಕದ ಬೆಟ್ಟಕ್ಕೆ ರಸ್ತೆಗಳನ್ನು ಮಾಡಿ ಪಂಚತಾರ ಹೋಟೆಲ್ಲುಗಳ ನಿರ್ಮಾಣದಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಉತ್ಪಾದಿಸುವ ಯೋಜನೆ.
6). ವಿಂಡ್ ಮಿಲ್ಸ್ ಗಳಿಂದ ಅಗ್ಗದ ಇಟ್ಟಿಗೆ ತಯಾರು ಮಾಡುವ ಯೋಜನೆ.
7). ರಾಯಚೂರು ಥರ್ಮಲ್ ವಿದ್ಯುತ್ ಘಟಕದಿಂದ ಉತ್ಪತ್ತಿಯಾಗುವ ಬೂದಿಯಿಂದ ಇಟ್ಟಿಗೆ ತಯಾರಿಸುವ ಯೋಜನೆ.
8). ಸಿದ್ದ ಉಡುಪುಗಳ ತಯಾರಿಕೆಯ ಫ್ಯಾಕ್ಟರಿಗಳ  ನಿರ್ಮಾಣ, ತನ್ಮೂಲಕ ಸಹಸ್ರಾರು ಜನರಿಗೆ ಉದ್ಯೋಗ, ಉಡುಪುಗಳ ರಫ್ತು, ವಿದೇಶಿ ವಿನಿಮಯ, ರಾಷ್ಟ್ರೀಯ ಖಜಾನೆಗೆ ಧನ, ತೆರಿಗೆ ರಹಿತ ಆದಾಯ.
9). ಲಂಡನ್ ಮಾದರಿಯಲ್ಲಿ ಬೆಂಗಳೂರಿನಲ್ಲಿ underground ಮೆಟ್ರೋ ರೈಲಿನ ಕಾಮಗಾರಿ.
10). ಸಂಕೇತ್ ಎಲೆಕ್ಟ್ರಾನಿಕ್ಸ್ : ಹಾಡುಗಳ ಧ್ವನಿ ಮುದ್ರಣಕ್ಕೆ ಕನ್ನಡಿಗರು ಮುಂಬೈ, ಚೆನ್ನೈ ಅಲೆಯುತ್ತಿದ್ದಾಗ ಆಗುತ್ತಿದ್ದ ಅವಮಾನಗಳನ್ನು ಕಂಡು ನೊಂದು ಕಟ್ಟಿದ ಸಂಕೇತ್ ಎಲೆಕ್ಟ್ರಾನಿಕ್ಸ್, ಕನ್ನಡಿಗರ ಸ್ವಾಭಿಮಾನದ ಸಂಕೇತ.

Shankarnag  is a visionary ಎನ್ನುವುದಕ್ಕೆ ಮೇಲಿನ ಯೋಜನೆಗಳು ಸ್ಯಾಂಪಲ್ ಗಳಷ್ಟೇ. ಒಂದು ಬಡ ಕುಟುಂಬದಲ್ಲಿ ಜನಿಸಿದ ಶಂಕರನಾಗ್ ರ ಬಾಲ್ಯ ಬಹುಪಾಲು ಕಾಸರಗೋಡಿನ ಅನಂದಾಶ್ರಮದಲ್ಲಿ ನಡೆಯುತ್ತದೆ. ಆಶ್ರಮದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯುತ ಹುದ್ದೆಯನ್ನು ಶಂಕರನಾಗ್ ರ ತಂದೆ ನಿರ್ವಹಿಸುತ್ತಿರುತ್ತಾರೆ. ಆಶ್ರಮದ ಆಚಾರಗಳು, ಕಟ್ಟುಪಾಡುಗಳು ಶಂಕರರ ಮೇಲೆ ಬಹಳ ಪ್ರಭಾವ ಬೀರುತ್ತೆ. ಆಶ್ರಮದ ಗುರುಗಳು ಪ್ರತಿ ರಾತ್ರಿ ತೋರಿಸುತ್ತಿದ್ದ animated ಚಿತ್ರಗಳು ಅವರ ಆಸಕ್ತಿ ನಾಟಕ, ಸಿನೆಮಾಗಳ ಕಡೆಗೆ ಹೊರಳುವಂತೆ ಮಾಡತ್ತೆ.
ಹಲವಾರು ಕಾರಣಗಳ ನಿಮಿತ್ತ ಶಂಕರರ ಕುಟುಂಬ ಮುಂಬೈನಲ್ಲಿ ನೆಲೆ ಕಟ್ಟಿಕೊಳ್ಳಬೇಕಾಗುತ್ತೆ. ಮುಂಬೈಗೆ ಕಾಲಿಟ್ಟಾಗ ಶಂಕರ್ ಗೆ 7 ವರ್ಷ. ಚಿಕ್ಕಂದಿನಿಂದಲೂ ಶಂಕರ್ ಆಶಾವಾದಿ, ಯಾವುದೇ ವಿಷಯದಲ್ಲಾದರೂ complaint, ಹಿಂಜರಿಕೆ ಇರುತ್ತಿರಲಿಲ್ಲ. ಅನಂತನಾಗ್ ತಮ್ಮ ಸ್ನೇಹಿತರನ್ನು ತಮ್ಮ ಪುಟ್ಟ ಮನೆಗೆ ಕರೆ ತರಲು ಹಿಂಜರಿದರೆ, ಶಂಕರ್ ತಮ್ಮ ಶ್ರೀಮಂತ ಸ್ನೇಹಿತರೊಡನೆ ಮನೆಯಲ್ಲಿ ಹರಟುತಿದ್ದರು.

ಮುಂಬೈನಲ್ಲೇ B.Comವರೆಗೂ ಓದಿದ ಶಂಕರ್ ಅಲ್ಲಿನ ಒಂದು ಬ್ಯಾಂಕ್ನಲ್ಲಿ clerk ಆಗಿ ಕೆಲಸ ಪಡಿತಾರೆ. ತಮ್ಮ ಓದಿನ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯ, ನಿರ್ದೇಶನ ಅಡೆ ತಡೆ ಇಲ್ಲದೆ ನಡೀತೀರತ್ತೆ. ಅದಾಗಲೇ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಅನಂತ್ ರಿಂದ ಚಿತ್ರವೊಂದರಲ್ಲಿ ಅಭಿನಯಿಸಲು ಆಹ್ವಾನ ಬಂದಾಗ, ನಟನೆಗಿಂತ ನಿರ್ದೇಶನದಲ್ಲೇ ನನಗೆ ಆಸಕ್ತಿ ಎಂದು ನಿರಾಕರಿಸುತ್ತಾರೆ. ಆದರೂ ಅಣ್ಣನ ಬಲವಂತಕ್ಕೆ ಗೀರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸಿದ್ದಲ್ಲದೆ, ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡಿತಾರೆ. 1978ರಲ್ಲಿ ತೆರೆಗೆ ಬಂದ ಆ ಚಿತ್ರ ತಾಂತ್ರಿಕವಾಗಿ ಬಹಳ ಗುಣಮಟ್ಟದ್ದಾಗಿ ಮೂಡಿತ್ತು. 24 ರ ಹರೆಯದಲ್ಲೇ ಜೀವ ತುಂಬಿ ಅಭಿನಯಿಸಿದ 'ಗಂಡುಗಲಿ' ಪಾತ್ರ ನಿಜಕ್ಕೂ ಖಡಕ್.
ಶಂಕರರ ಮನೆ ಮಾತು ಕೊಂಕಣಿ, ಮುಂಬೈಗೆ ಹೋದ ನಂತರ ಅವರಿಗೆ ಕನ್ನಡ ಭಾಷೆಯ ನಂಟು ಕಡಿದಾಗಿರುತ್ತೆ. ಆದರೆ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕೊಸ್ಕರ ಕನ್ನಡ ಕಲಿತು ಉತ್ತರ ಕರ್ನಾಟಕ ಶೈಲಿಯಲ್ಲಿ ಡಬ್ಬಿಂಗ್ ಮಾಡ್ತಾರೆ. ಮತ್ತೆ ಮುಂಬೈಗೆ ಹಿಂದಿರುಗದೆ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ತಾರೆ.

ಶಂಕರನಾಗ್ ರನ್ನು  ಕೇವಲ ಸಿನೆಮಾರಂಗಕ್ಕೆ ಸೀಮಿತಗೊಳಿಸಿದರೆ ಅದು ಅವರಿಗೆ ಮಾಡಬಹುದಾದ ದೊಡ್ಡ ಅವಮಾನವೇ ಸರಿ. ಹಲವಾರು ಯೋಜನೆಗಳನ್ನು ತಲೆ ತುಂಬಾ ತುಂಬಿಕೊಂಡು ಬಹಳ ಉತ್ಸಾಹದಿಂದ ಶಂಕರ್ ಹಗಲು-ರಾತ್ರಿ ದುಡಿಯುತ್ತಿರುವುದನ್ನು ಕಂಡು ಸುತ್ತಮುತ್ತಲಿನವರು ಬೆರಗಿನಿಂದ ನೋಡುತ್ತಿದ್ದರಂತೆ. ದಿನದಲ್ಲಿ 8 ಗಂಟೆ ಜನ ಮಲಗಿ ಅತ್ಯಮೂಲ್ಯ ವೇಳೆಯನ್ನು ವ್ಯರ್ಥ ಮಾಡ್ತಾರಲಪ್ಪ ಎನ್ನುತ್ತಿದ್ದ ಶಂಕರ್ ಪ್ರಕಾರ ಪ್ರತಿ ನಿಮಿಷವೂ ಅಮೂಲ್ಯ. ಶೂಟಿಂಗ್ ಸ್ಥಳದಿಂದ ಮನೆಗೆ, ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಹೋಗುವಾಗ ಮಾತ್ರ ನಿದ್ರಿಸುತ್ತಾ ಇದ್ದರಂತೆ. ಅವರ ವಾಹನವೇ ಒಂದು ದೊಡ್ಡ ಆಫೀಸ್ನಂತೆ, ಹಲವಾರು ಪ್ರಾಜೆಕ್ಟ್ ಗಳ ರಿಪೋರ್ಟ್ ಗಳು, ಅಧುನಿಕ ಟೆಕ್ನಾಲಜಿಯ ಪುಸ್ತಕಗಳ ರಾಶಿಯೇ ತುಂಬಿರುತ್ತಿತ್ತಂತೆ.

ಅದೆಷ್ಟೇ ಪ್ರಬುದ್ಧ ವ್ಯಕ್ತಿಯಾದರೂ ಅವರು ತೊಡಗಿಸಿಕೊಂಡಿದ್ದ ಪ್ರಾಜೆಕ್ಟ್ ಗಳು, ಸಿನಿಮಾ ನಿರ್ಮಾಣ-ನಿರ್ದೇಶನಗಳಿಂದ ದೊಡ್ಡ ಸಾಲಗಾರನಾಗೇ ಇದ್ದರು. ಸಾಲ ಅವರೆದುರು ಎಂದೂ ಸೋಲಲಿಲ್ಲ. ಏನಾದರೊಂದು ಹೊಸತನ್ನು ಮಾಡುವ ಉತ್ಸಾಹ ಮನದಲ್ಲಿ ಇತ್ತೇ ಹೊರತು, ಹಣದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಬೆಂಗಳೂರು ಮೆಟ್ರೋ ಯೋಜನೆಗೆ ಬೇಕಾದ ವಿಷಯ ಸಂಗ್ರಹಣೆಗೆ ಕರ್ನಾಟಕದ ಆಗಿನ ಮುಖ್ಯಮಂತ್ರಿಯವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದೊಯ್ದು ಅದರ ಸ್ಥೂಲ ಅಧ್ಯಯನ ನಡೆಸಿ, ಬೆಂಗಳೂರಿನಲ್ಲಿ geologist ಗಳಿಂದ ವರದಿ ತರಿಸಿ ಪ್ರಾಜೆಕ್ಟ್ ರಿಪೋರ್ಟ್ ತಯಾರು ಮಾಡಿದ್ದರು. underground railway ಮಾಡಿ ಬೆಂಗಳೂರಿನ ಹಸಿರು ಸಂಪತ್ತನ್ನು ಉಳಿಸಿಕೊಳ್ಳಬೇಕು, ಉದ್ಯಾನನಗರಿ ಎಂಬ ಹೆಸರು ಶಾಶ್ವತವಾಗಿ ಬೆಂಗಳೂರಿಗೆ ಸಲ್ಲಬೇಕು ಎಂಬುದು ಅವರ ಕನಸಾಗಿತ್ತು.                                

ಶಂಕರನಾಗ್ ನಿರ್ದೇಶಿಸಿದ ಮಿಂಚಿನ ಓಟ, ಆಕ್ಸಿಡೆಂಟ್, ಜನ್ಮ ಜನ್ಮದ ಅನುಬಂಧ, ಗೀತ, ಒಂದು ಮುತ್ತಿನ ಕಥೆ ಮತ್ತೂ ಹಲವು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ಎಲ್ಲವೂ ಹೊಸ ವಿಷಯಗಳು, ತಾಂತ್ರಿಕವಾಗಿಯೂ ಗುಣಮಟ್ಟದ್ದಾಗಿದ್ದವು. ನೆನಪಿರಲಿ ಆಗಿನ್ನೂ ಇಷ್ಟೊಂದು ಕಂಪ್ಯೂಟರೀಕರಣ ಆಗಿರಲಿಲ್ಲ. ಸಿನಿಮಾ ನಿರ್ಮಾಣ ಇಷ್ಟೊಂದು advanced ಆಗಿರಲಿಲ್ಲ. ಜಾಗತೀಕರಣ, ಉದಾರೀಕರಣ, ಉನ್ನತೀಕರಣ, ಕಂಪ್ಯೂಟರೀಕರಣ ಇದ್ಯಾವುದೇ ಕರಣಗಳಿಲ್ಲದ ಕಾಲದಲ್ಲಿ ಅದ್ಭುತಗಳನ್ನು ಸೃಷ್ಟಿಸುವ ತಾಕತ್ತು ಶಂಕರ್ ಗಿತ್ತು.

ಗೋಕಾಕ್ ಚಳುವಳಿಯನ್ನು ಮುನ್ನಡೆಸಿದ್ದ ರಾಜ್ ರ ಜೊತೆ ಉತ್ಸುಕರಾಗಿ ಶಂಕರ್ ಭಾಗವಹಿಸಿದ್ದರು. ರಾಜ್ ಹಾಗೂ ಶಂಕರ್ ನಡುವಿನ ಸೌಹಾರ್ಧ ಸಂಬಂದಕ್ಕೆ 'ಒಂದು ಮುತ್ತಿನ ಕಥೆ' ಚಿತ್ರವೇ ಸಾಕ್ಷಿ. ಶಂಕರ್ ಸಾವಿಗೂ ರಾಜ್ ಗೂ ಸಂಬಂಧ ಕಟ್ಟಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು ಜನಗಳ  ಕೆಟ್ಟ ಮನಸ್ಥಿಗೆ ಸಾಕ್ಷಿ. ಆರ್.ಕೆ. ನಾರಾಯಣ್ ರ 'ಸ್ವಾಮಿ ಅಂಡ್ ಫ್ರೆಂಡ್ಸ್' ಕಥೆ 'ಮಾಲ್ಗುಡಿ ಡೇಸ್' ಧಾರಾವಾಹಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದು ಶಂಕರರ brilliance ಗೆ ನಿದರ್ಶನ. ಶಂಕರರ brilliance, ಅದರಿಂದ ಬಂದ ಫೇಮ್ ಆ ಭಗವಂತನಿಗೂ ಅಸೂಯೆ ಆಯ್ತು ಅನ್ಸುತ್ತೆ.

ಶಂಕರನಾಗ್ ಚಿತ್ರರಂಗಕ್ಕೆ ಬಂದು ಕೇವಲ 12 ವರ್ಷ ಆಗಿತ್ತು ಅಷ್ಟೇ. ಅಷ್ಟಕ್ಕಾಗಲೇ ಕರ್ನಾಟಕದಾದ್ಯಂತ ಹೆಸರಾಗಿದ್ದರು. ಒಬ್ಬ ಪ್ರಬುದ್ಧ ಚಿಂತಕ, ಚಿತ್ರ ನಿರ್ದೇಶಕ, ಚಳುವಳಿಗಾರ, ಹೊಸ ಯೋಜನೆಗಳ ಹರಿಕಾರ, ನಾಟಕಕಾರ, ಸಮಾಜಮುಖಿ
ಈ ನಾಡಿನ ದುರಂತ ಅಲ್ಪಾಯುಶಿಯಾಗಬೇಕಾಯಿತು. ಒಂದು ಹೊಸ ಚಿತ್ರದ ಮಾತುಕತೆಗೆಂದು ದಾವಣಗೆರೆಗೆ
ನಡುರಾತ್ರಿಯಲ್ಲಿ ಕಾರಿನಲ್ಲಿ ಹೊರಟಾಗ ನಸುಕಿನಲ್ಲಿ ಭೀಕರ ಅಪಘಾತಕ್ಕೊಳಗಾಗಿ ಸಾವನ್ನಪ್ಪುತ್ತಾರೆ.

ಶಂಕರನಾಗ್ ಇಂದು ಇದ್ದಿದ್ದರೆ ಖಂಡಿತ ಕನ್ನಡ ಚಿತ್ರರಂಗ ಈ ರೀತಿ ಬಳಲುತ್ತಿರಲಿಲ್ಲ. ಇಷ್ಟು ಮಲಿನಯುಕ್ತವಾಗುತ್ತಿರಲಿಲ್ಲ. ಕರ್ನಾಟಕವಲ್ಲದೆ ಇಡೀ ಭಾರತ ಹೆಮ್ಮೆ ಪಡುವ ಚಿತ್ರಗಳು, ಸಮಾಜಮುಖಿ ಯೋಜನೆಗಳು ಬೆಳಕಿಗೆ ಬರುತ್ತಿದ್ದಂತು ಖಂಡಿತ.
ಅರುಂದತಿ ನಾಗ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು, "ಶಂಕರನಾಗ್ ಇಲ್ಲದೆ ನನಗಾಗಿರುವ ವೈಯಕ್ತಿಕ ನಷ್ಟ ತುಂಬಲಾಗದ್ದು. ಆದರೆ ಇಡೀ ಕರ್ನಾಟಕಕ್ಕೆ ಭಾರತಕ್ಕೆ ಅವನ ಸಾವು ಬಹಳ ದೊಡ್ಡ ನಷ್ಟ. ಹಲವಾರು ಯೋಜನೆಗಳ ಸಾಕಾರಕ್ಕೆ ಹಗಲುರಾತ್ರಿ ದುಡಿಯುತ್ತಿದ್ದ, ಬಾಯ್ಬಿಟ್ಟರೆ ಹೊಸತನ್ನು ಮಾತಾಡುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡದ್ದು ಈ ನಾಡಿನ ದೊಡ್ಡ ದುರದೃಷ್ಟ."

ದೇಶ ಕಟ್ಟಲು ದುಡಿದ, ಹಿಂದೂ ಧರ್ಮದ ಸತ್ವವನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದ, ಸಾವಿಗೆ ಕಿಂಚಿತ್ತೂ
ಹೆದರದೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ದೇಶ ಪ್ರೇಮಿ ಭಗತ್ ಸಿಂಗ್, ಅತ್ಯಂತ ಕಡು ಬಡತನದ ಬದುಕು ಸವೆಸಿದ್ದರೂ ಗಣಿತಶಾಸ್ತ್ರದಲ್ಲಿ ಬ್ರಿಲಿಯಂಟ್ ಆಗಿದ್ದ ಶ್ರೀನಿವಾಸ ರಾಮಾನುಜನ್ ಮತ್ತೂ ಹಲವರಂತೆ, ಶಂಕರನಾಗ್
ಅಲ್ಪಾಯುಶಿಯಾದದ್ದನ್ನು ನೋಡಿದರೆ ಆ ಭಗವಂತನ ಅಸ್ತಿತ್ವದ ಬಗ್ಗೆ ಸಂಶಯ ಮೂಡುತ್ತೆ. ಆ ಸಂಶಯ ನಿಜವಾಗದೆ
ಮತ್ತೆ ಹುಟ್ಟಿ ಬರಲಿ ಶಂಕರನಾಗ್.        

      

ಗುರುವಾರ, ಸೆಪ್ಟೆಂಬರ್ 6, 2012

ಸ್ವಾವಲಂಬಿ ಹಳ್ಳಿಗರ ನಿರ್ಮಾತೃ - ಶ್ರೀಕ್ಷೇತ್ರ ಧರ್ಮಸ್ಥಳ.

"ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ, ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ", ದಯವಿಟ್ಟು ಎಲ್ಲೋ ಕೇಳಿದ ಹಾಗಿದೆ ಅನ್ನಬೇಡಿ. ಇದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಕಾಣಿಕೆ ನೀಡಿದ, ಪ್ರೇಮಕವಿ ಎಂದೇ ರಾಜ್ಯಾಂದ್ಯಂತ ಹೆಸರುಗಳಿಸಿದ್ದ ಕೆ.ಎಸ್. ನರಸಿಂಹಸ್ವಾಮಿಯವರ ರಚನೆ.  ಇದು ಅವರು ಬರೆದಿದ್ದ "ಮೈಸೂರು ಮಲ್ಲಿಗೆ" ಕವನಸಂಕಲನದ ಒಂದು ಕವನ. ಮೈಸೂರು  ಮಲ್ಲಿಗೆ ಸಿನೆಮಾದಲ್ಲಿ ಈ ಕವನಸಂಕಲನದ ಸಾಕಷ್ಟು ಕವಿತೆಗಳನ್ನು ಬಳಸಿಕೊಳ್ಳಲಾಗಿತ್ತು. ನಮ್ಮ ಕನ್ನಡದ ಭಾವಗೀತ ಪ್ರಾಕಾರವನ್ನು ವಿಶಿಷ್ಟ ರೀತಿಯ ರಚನೆಗಳ ಮೂಲಕ ಶ್ರೀಮಂತಗೊಳಿಸಿದ ಕವಿ
ಕೆ.ಎಸ್.ನರಸಿಂಹಸ್ವಾಮಿಯವರು. ಅವರು ಮಾತ್ರ ಬಡವರಾಗೇ ವಿಧಿವಶರಾದದ್ದು, ಇತ್ತೀಚೆಗಷ್ಟೇ ಅಂತ್ಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಕ್ರಿಕೇಟ್ನಲ್ಲಿ ಸಚಿನ್ ಸತತವಾಗಿ 3 ಬಾರಿ ಬೌಲ್ಡ್ ಆದಷ್ಟೇ ನಿಜ.

ಹಲವು ದಶಕಗಳ ಹಿಂದೆ, ಬಳೆಗಾರ ಎಂದರೆ ಆತ ಕೆಲವು ಹಳ್ಳಿಗಳ, ಊರುಗಳ ಬಹಳ ಪರಿಚಯಿಸ್ಥ ವ್ಯಕ್ತಿ. ಒಂದು ಊರಿಗೆ ಹೇಗೆ ಪಟೇಲರು, ಶಾನುಭೋಗರು, ಅರ್ಚಕರು ಇರುತ್ತಾರೋ ಅದೇ ರೀತಿ ಬಳೆಗಾರನದೂ ಪ್ರಮುಖ ಸ್ಥಾನ. ಆತನ ಬರುವಿಕೆಗೆ ಊರಿನ ಹೆಣ್ಣುಮಕ್ಕಳ್ಳೆಲ್ಲಾ ಕಾಯುತ್ತಿದ್ದರು. ಆತ ಆ ಊರಿನ ಒಂದು ಮುಖ್ಯ ಭಾಗವೇ ಆಗಿರುತ್ತಿದ್ದ. ಇಂದಿನ ದಿನಗಳಲ್ಲಿ ಮನೆ ಮುಖ್ಯಸ್ಥರಿಗೆ ತಕ್ಕುದಾದ ಬೆಲೆ ಸಿಗುವುದು ಕಷ್ಟ ಅಂತಹುದರಲ್ಲಿ ಬೀದಿ ಅಲೆಯೋ ಬಳೆಗಾರನಿಗೆ ಸಿಗುವುದು ನಮ್ಮ ರಾಜಕಾರಣಿಗಳಿಂದ ಸ್ವಚ್ಚ ಆಡಳಿತ ಬಯಸಿದಷ್ಟೇ ಕಷ್ಟ.

ಇಂಥಾ ಒಬ್ಬ ಬಳೆಗಾರನನ್ನು, ನಾನು ಇತ್ತೀಚಿಗೆ ನಮ್ಮ ಮಾವ ತೀರಿಹೋದ ಕಾರಣ ಅವರ ಕೊನೆ ದರ್ಶನಕ್ಕೆಂದು ತುಮಕೂರಿನಿಂದ ಸುಮಾರು 80 ಕಿಮೀ ದೂರದಲ್ಲಿರುವ ಬುಕ್ಕಾಪಟ್ಟಣ ಎಂಬ ಹಳ್ಳಿಗೆ ಹೋಗುತ್ತಿರುವಾಗ ಭೇಟಿ ಮಾಡಿದೆ.

ಆಗ ತಾನೇ ಬಂದು ನಿಂತ ಬಸ್ಸನ್ನು ಎಲ್ಲರೂ ವ್ಯವಧಾನದಿಂದಲೇ ಹತ್ತಿದರು. ಹಳ್ಳಿಗರಾದರೂ ಅವರಲ್ಲಿ ಸಾಮಾನ್ಯ ಜ್ಞಾನ ಇತ್ತು. ಬೆಂಗಳೂರಿನಂತೆ ಬಸ್ ಬಂದ ತಕ್ಷಣ ಕುರಿಗಳಂತೆ ನುಗ್ಗಿ ಸೀಟನ್ನು ಆಕ್ರಮಿಸುವ ರೀತಿ ಖಂಡಿತ ಆಗ್ಲಿಲ್ಲ. ಕಿಟಕಿ ಪಕ್ಕ ಕುಳಿತಿದ್ದ ಬಳೆ ಮಾರುವಾತನ ಪಕ್ಕ ನಾನು ಹೋಗಿ ಕುಳಿತೆ. ಹಳ್ಳಿ ಬಸ್ ಎಂದರೆ ಕೇಳಬೇಕೆ ಹೊಸ ಹಾಡನ್ನೂ ತಾತನ ಕಾಲದ ಹಾಡು ಕೊರಗಿ ಕೊರಗಿ ಮೊಳಗುವಂತೆ, ಕಿವಿ ಕಿತ್ತು ಹೋಗುವಂತೆ ಹಾಕಿದ್ದ. ಅದರ ಜೊತೆ ಹಲವರ ಮೊಬೈಲ್ ಕೋರಸ್ನಂತೆ ತಮಿಗಿಷ್ಟ ಬಂದಂತೆ ಕಿರುಚುತ್ತಿದ್ದವು. ಅವರ ಮೊಬೈಲ್ ಫೋನ್ ಪ್ರದರ್ಶನ, ನಮ್ಮ ರಾಷ್ಟ್ರದ ಉದಾರೀಕರಣ ನೀತಿಯನ್ನು ಬಹಳ ಉದಾರವಾಗಿ ತಮ್ಮ ತಮ್ಮ ಉಡದಾರಕ್ಕೆ ಸಿಕ್ಕಿಸಿಕೊಂಡಂತೆ ನನಗನ್ನಿಸಿತು.  ಹೆಂಗಸರಂತೂ ತಮ್ಮ ಹಳ್ಳಿ, ಮನೆ, ಕಷ್ಟ, ಸುಖದ ವಿಷಯಗಳನ್ನು ಬಸ್ಸಿನಲ್ಲಿರುವವರಿಗೆಲ್ಲಾ ಕೇಳುವಂತೆ ಮಾತಾಡುತ್ತಿದ್ದರು. ನನ್ನ ಪಕ್ಕ ಕುಳಿತಿದ್ದ ಬಳೆಗಾರ ಮಾತ್ರ ಕಿಟಕಿಯೆಡೆಗೆ ಮುಖ ಮಾಡಿ ಏನನ್ನೋ ಧೀರ್ಘವಾಗಿ ಯೋಚಿಸುತ್ತಿದ್ದ. ಆತನ ಎಡಗೈ ನೇತುಹಾಕಿದ್ದ ಬಳೆಗಳನ್ನು ಸುರಕ್ಷಿತವಾಗಿ ಕಾಯುವ ಜವಾಬ್ದಾರಿ ಹೊತ್ತಿತ್ತು. ಬಲಗೈ ಎಲ್ಲಿತ್ತು ಎನ್ನಬೇಡಿ ನಾನದನ್ನು ಗಮನಿಸಲಿಲ್ಲ. ತಕ್ಷಣವೇ ಟಿಕೇಟ್ ಟಿಕೇಟ್ ಎಂದು ಬಳೆಗಾರನ ಬಳಿಗೆ ಕಂಡಕ್ಟರ್ನ ಕೈ ಚಾಚಿಕೊಂಡಿತು. 4 ಸಲ ಅಲ್ಲ 40 ಸಲ ಕಿರುಚಿದರೂ ಒಂದೇ ಟಿಕೇಟ್ ಕೊಳ್ಳುವುದು ಎಂಬತ್ತಿತ್ತು ಬಳೆಗಾರನ ನೋಟ. ಮತ್ತೆ ಗಂಭೀರವದನನಂತೆ ಕಿಟಕಿಯೆಡೆಗೆ ಆತನ ಮುಖ ತಿರುಗಿತು.

ಪ್ರಯಾಣದ  ವೇಳೆಯಲ್ಲಿ ಪಕ್ಕದವರ ತಲೆ ತಿನ್ನದಿದ್ದರೆ ನನ್ನ ತಲೆ ನಿಲ್ಲಲ್ಲ. ಚರ್ಚೆಗಳೆಂದರೆ ಇಷ್ಟಪಡುವ ನಾನು ಆತನನ್ನು, ಈಗಲೂ ಜನ ಬಳೆಗಳನ್ನು ಕೊಳ್ಳುತ್ತಾರಾ? ಅದರಿಂದ  ಬರುವ ಲಾಭ ನಿಮ್ಮ ಜೀವನಕ್ಕೆ ಆಗುತ್ತದಾ? ಎಂಬ ಪ್ರಶ್ನೆಗಳಿಂದ ಮಾತಿಗೆ ಎಳೆದೆ. ನೀವು ಹೇಳಿದ್ದು ನಿಜ ಹಿಂದಿನಂತೆ ಬಳೆಗಳಿಗೆ ಬಳೆಗಾರನನ್ನು ಕಾಯುವ ಅವಶ್ಯಕತೆ ಜನರಿಗಿಲ್ಲ. ಪ್ರತಿ ಊರುಗಳಲ್ಲೂ ಹೆಣ್ಣುಮಕ್ಕಳು ಬಯಸುವ ಎಲ್ಲಾ ರೀತಿಯ ಅಲಂಕಾರಿಕ ವಸ್ತುಗಳು ದೊರೆಯುತ್ತವೆ. ಆದರೆ ಕೆಲವು seasonಗಳಲ್ಲಿ, ಜಾತ್ರೆಗಳಲ್ಲಿ ಸ್ವಲ್ಪ ಚೆನ್ನಾಗಿ ವ್ಯಾಪಾರ ವಹಿವಾಟು ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಉತ್ತರ ಆತನದಾಗಿತ್ತು.

ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸಣ್ಣ ಪುಟ್ಟ ವ್ಯಾಪಾರಗಳಿಗೆ ಹಣಕಾಸಿನ ನೆರವು ನೀಡಿ ಹಳ್ಳಿಗರನ್ನು ಸ್ವಾವಲಂಬಿಗಳಾಗಿ ಬದುಕಲು ಅನುವು  ಮಾಡಿಕೊಡುತ್ತಿರುವುದು ಆತನಿಂದ ತಿಳಿಯಿತು. ಪ್ರತಿ ಹಳ್ಳಿಯಲ್ಲಿ ಕೆಲವು ಜನ ಹೆಂಗಸರು ಸೇರಿ ಒಂದು ಸಂಘದ ರಚನೆ ಮಾಡುತ್ತಾರೆ, ಅಧ್ಯಕ್ಷೆ , ಉಪಾಧ್ಯಕ್ಷೆ, ಸದಸ್ಯರುಗಳೆಂಬ ವಿವಿಧ ಸ್ಥಾನಗಳನ್ನೋಳಗೊಂಡ ಆ ಸಂಘದ ಎಲ್ಲರೂ ತಮ್ಮ ತಮ್ಮ ವ್ಯಾಪಾರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಸಾಲ ಪಡೆಯುತ್ತಾರೆ. ಪ್ರತಿ ವಾರಕ್ಕೊಮ್ಮೆ ಇಂತಿಷ್ಟು ಹಣ ಕಟ್ಟಿ ಸಾಲ ತೀರಿಸಬಹುದಾದ ವ್ಯವಸ್ಥೆಯುಳ್ಳದ್ದಾಗಿದೆ. ಆತನಿಂದ ತಿಳಿದ  ಮತ್ತೊಂದು ವಿಷಯವೆಂದರೆ ಆ ರೀತಿ ಸಾವಿರಾರು ಸಂಘಗಳು ಬಹಳ ವ್ಯವಸ್ಥಿತವಾಗಿ ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವುದು. ಕೇವಲ ತುಮಕೂರು ಜಿಲ್ಲೆಗೆ 114 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ ಎಂದರೆ ಇದರ ಲಾಭ ಪಡೆದ ಜನರೆಷ್ಟು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು. ಆ ರೀತಿಯ ಯೋಜನೆಗಳು ಹಳ್ಳಿಗರಿಗೆ ಸ್ವಉದ್ಯೋಗ ಮಾಡಲು ಉತ್ತೇಜಿಸುವ ಜೊತೆಗೆ, ಎಲ್ಲರ ನಡುವಿನ ಸಹಬಾಳ್ವೆಗೆ ಕಾರಣವಾಗುತ್ತಿರುವುದು ಶ್ಲಾಘನೀಯ.

ಧರ್ಮಸ್ಥಳವೆಂದರೆ ತಲೆಬೋಡು ಮಾಡಿಸಿಕೊಳ್ಳುವುದು ನೆನಪಾಗುವುದು ಬಿಟ್ಟರೆ ನನಗಿನ್ನೇನೂ ತಿಳಿದಿರಲಿಲ್ಲ. ಶ್ರೀಕ್ಷೇತ್ರ ಧರ್ಮಸ್ಥಳದಿಂದ ಈ ರೀತಿ ಅದೆಷ್ಟೋ ಜನಪರ ಕಾರ್ಯಗಳಾಗುತ್ತಿರುವುದು ಆತನಿಂದ ತಿಳಿದಂತಾಯಿತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪರಿಶ್ರಮ ಆತನ ಮಾತುಗಳಲ್ಲಿ ತುಂಬಿತ್ತು. ಆತ ಸುಮಾರು 1 ಗಂಟೆ ನಿರರ್ಗಳವಾಗಿ, ಸುಲಲಿತವಾಗಿ ಅಚ್ಚ ಕನ್ನಡದಲ್ಲಿ ಎಲ್ಲವನ್ನೂ ವಿವರಿಸಿದ. ಆತ ಮಾತಾಡಿದ ರೀತಿ ಎಂಥಾ ಪದವೀಧರನನ್ನು ಮೂಲೆಗೆ ತಳ್ಳುವಂತಿತ್ತು. ಎಷ್ಟೇ ಆಗಲಿ ಸರ್ಟಿಫಿಕೇಟ್ಗಿಂತ ತಿಳವಳಿಕೆ, ಅನುಭವ ಮುಖ್ಯ ಅಲ್ಲವೇ.

ಆದರೆ ಇಂಥಾ ತಿಳುವಳಿಕೆ ಅಥವಾ ಹೊಸ ವಿಷಯಗಳು ನಾನು ಇತ್ತೇಚೆಗೆ ಹೊಸಪೇಟೆಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರುವಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ software engineer ನಿಂದ ದೊರೆಯಲಿಲ್ಲ. ಅಂದಹಾಗೆ ಹೊಸಪೇಟೆ ಎಂದರೆ ಗೊತ್ತಲ್ಲಾ ನಮ್ಮ ಮಧ್ಯ ಕರ್ನಾಟಕ. ಆಕಸ್ಮಾತಾಗಿ ನೀವೇನಾದರೂ ಅ ಸ್ಥಳದಿಂದ ಆಕಾಶವನ್ನು ಗಮನಿಸಿದ್ದೆ ಆದಲ್ಲಿ ಯಾರೋ ಬಟ್ಟೆಯಿಂದ ಶುಭ್ರವಾಗಿ ಆಕಾಶವನ್ನು ಸ್ವಚ್ಚವಾಗಿ ಒರೆಸಿದ್ದಂತೆ ಕಾಣುತ್ತದೆ. ಮೋಡಗಳು ಪರಸ್ಪರ ಮುನಿಸಿಕೊಂಡು ದೂರವಾಗಿವೆಯೇನೋ ಅನಿಸುತ್ತದೆ. ಇದು ನಮ್ಮ ಮಧ್ಯ ಹಾಗೂ ಉತ್ತರ ಕರ್ನಾಟಕದ ವೈಶಿಷ್ಟ್ಯ. ಆತನೊಂದಿಗೆ ಮಾತು ಶುರುಮಾಡಲು ಹಿಂಜರಿಕೆ. ಏನೇ ಕೇಳಿದರೂ 4 ಕ್ಕಿಂತ ಹೆಚ್ಚು ಪ್ರಶ್ನೆಗಳು ಹೊಳೆಯಲಿಲ್ಲ. ಎಲ್ಲಿ ಕೆಲಸ? ಯಾವ ಕಂಪನಿ ? technology? ಕೆಲಸ ಹೇಗಿರತ್ತೆ? ವೀಕೆಂಡ್ ಹೇಗೆ ಕಳಿತೀರಾ? ಎಲ್ಲದಕ್ಕೂ ಆತನಿಂದ one word answer ಕೆಲವೇ ನಿಮಿಷಗಳಲ್ಲಿ ಚರ್ಚೆ ಖಲ್ಲಾಸ್, ಒಡನೆ  ಮೂಡಿದ್ದು ನೀರವ ಮೌನ. ನಾನೆಷ್ಟೇ ಯೋಚನೆ ಮಾಡಿ ಪ್ರಶ್ನಿಸಿದರೂ ನಿರಾಸೆಯ ಉತ್ತರ. ಸರ್ವಸಂಘ ಪರಿತ್ಯಾಗಿಯಾಗಿ ಯಾವುದೋ ಮಠದ ಉತ್ತರಾಧಿಕಾರಿಯಂತೆ ಆತನ ಉತ್ತರಗಳು ಬರುತ್ತಿದ್ದವು.

ಆತನ ಉತ್ತರಗಳಿಂದ ಬೇಸತ್ತ ನನಗೆ ನನ್ನ ಸೀಟನ್ನು ಹಿಂದಕ್ಕೆ ತಳ್ಳಿ ನಿದ್ರಿಸುವುದು ಬಿಟ್ಟು, ಮತ್ತೇನೂ ಮಾಡಲಾಗಲಿಲ್ಲ. ಬಳೆಗಾರನ ಭೇಟಿಯಿಂದ ಸಿಕ್ಕ ಆತ್ಮೀಯ ಚರ್ಚೆ ಇಲ್ಲಿ ಸಿಗಲಿಲ್ಲ. ಆದರೆ ನಗರ ಪಟ್ಟಣಗಳ ಜನರು ಸಹಜವಾಗಿ ಮಿತಭಾಷಿಕರಾಗುತ್ತಿರುವುದು, ಆತ್ಮೀಯವಾಗಿ ಬೇರೆಯವರೊಡನೆ ಬೆರೆಯದಿರುವುದು, ಅಕ್ಕಪಕ್ಕವೇ ಕುಳಿತಿದ್ದರೂ ಮೂಗರಂತೆ ಮೌನಕ್ಕೆ ಶರಣಾಗುವುದು, ನೆರೆಹೊರೆಯಲ್ಲಿದ್ದರೂ ಸುಳಿವೇ ಇಲ್ಲದಂತೆ ಬದುಕುತ್ತಿರುವುದು ಪಾಶ್ಚಾತ್ಯ  ಜೀವನ ಶೈಲಿಯ ಅನುಕರಣೆಯ ಪರಿಣಾಮವಲ್ಲದೆ ಮತ್ತೇನೂ ಅಲ್ಲ. ಇದೇನೇ ಇರಲಿ ಹಳ್ಳಿಗರನ್ನು ಸ್ವಾಭಿಮಾನಿಗಳನ್ನಾಗಿ, ಸ್ವತಂತ್ರವಾಗಿ ಬದುಕುವಂತೆ, ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದಂತೆ, ಇನ್ನೂ ಹಲವು ಸಂಸ್ಥೆಗಳು ಹಣಬೆಗಳಂತೆ ಬೆಳೆಯಲಿ.
      

ಸೋಮವಾರ, ಆಗಸ್ಟ್ 13, 2012

ಸಣ್ಣ ಸಣ್ಣ ಸಂಗತಿಗಳ ನಡುವೆ ಅಡಗಿರುವ ಖುಷಿ, ಸಡಗರ, ತೃಪ್ತಿ - ಒಂದು ಅವಲೋಕನ

 ಆಗ ತಾನೇ ಸಣ್ಣಗೆ ಸುರಿದು ನಿಂತ ಸೋನೆ ಮಳೆ. ಸಂಜೆಯ ಹೊತ್ತು. ಮೈ ಬಿಸಿಯ ಜೊತೆ ಗುದ್ದಾಡಲು ಬೀಸುತ್ತಿರುವ ತಂಗಾಳಿ. ಸುಂಗಂಧವ ತನ್ನೆದೆಯಿಂದ ತೇಲಿಬಿಟ್ಟಂತೆ ಘಮಘಮಿಸುತ್ತಿರುವ ಭೂಮಿ. ಇವುಗಳ ಜೊತೆ ಚಳಿ ಕೊಲ್ಲಲು ತಿನ್ನೋ ರಸ್ತೆ ಬದಿಯ ಮೆಣಸಿನಕಾಯಿ ಬಜ್ಜಿಯಿಂದ ಸಿಗೋ ಖುಷಿ ಅನುಭವಿಸಿದವರಿಗೇ ಅರ್ಥವಾಗೋದು. ಬಜ್ಜಿಯ ಬೆಲೆ ಕಡಿಮೆಯಾದರೂ ಆ ಕ್ಷಣದ ಸುಖಕ್ಕೆ ಬೆಲೆ ಕಟ್ಟಲಾಗದು.

ಮುಂಜಾನೆಯಲಿ ಪತ್ರಿಕೆ ಓದುತ್ತಾ ಹೀರೋ ಕಾಫಿಯಿಂದ ಸಿಗೋ ಮಜಾ ಯಾವ ಕಾಫಿ ಡೇನಲ್ಲಿ ಸಿಗತ್ತೆ ಹೇಳಿ. ಸುಡೋ ನೆತ್ತಿಯ ಓಲೈಸಲು ಕುಡಿಯೋ ಮಸಾಲಭರಿತ ಮಜ್ಜಿಗೆಯನ್ನ, ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ, ಯಾವ ಪಾನೀಯಗಳಿಂದಲೂ ಬಯಸಲಾಗುವುದಿಲ್ಲ.

ಅಮ್ಮನ ಅಕ್ಕರೆಯ ಮಡಿಲಿನಲ್ಲಿ ಮಲಗಿ ಪಡೆದ ಸುಖ, ಅಪ್ಪನ ಜೊತೆ ತೊಡಗಿ ಮುಳುಗಿಹೋದ ಸ್ನೇಹಭರಿತ ಚರ್ಚೆಗಳು ನೀಡೋ ತಿಳುವಳಿಕೆ, ಒಡಹುಟ್ಟಿದವರೊಡನೆ ಕಿತ್ತಾಡಿ, ಗುದ್ದಾಡಿ ಹಲವನ್ನ ನಮ್ಮದಾಗಿಸಿಕೊಂಡ ಕ್ಷಣಗಳು, ನೆರೆಹೊರೆಯವರಲ್ಲಿ ಬೆರೆತುಹೊದಾಗ ಎಲ್ಲರೂ ನಮ್ಮವರು ಎಂದು ಮೂಡುವ ಭಾವನೆಗಳು, ಯಾರ ಜೀವನದಲ್ಲಿ ಸಂಭವಿಸುವುದಿಲ್ಲವೋ ಅವರದೊಂದು ಅಪೂರ್ಣ ಜೀವನವೇ ಸರಿ.

ಒಂದು ಹುಡುಗಿಯ ನೋಡಿ ಮನಸ್ಸಿಗೆ ಅರಿವಿಲ್ಲದೆ ಮೂಡೋ ಆಸಕ್ತಿ, ಮಾತಾಡಿಸಬೇಕೆಂಬ ಚಡಪಡಿಕೆ, ಕಂಡಗಲೆಲ್ಲಾ ಆಗುವ ತೊಳಲಾಟಗಳು, ಮನಸ್ಸಲ್ಲೆಲ್ಲಾ ಕವಿತ್ವ ತುಂಬಿ, ಕನಸುಗಳು ಕಲ್ಪನೆಗಳಿಗೆ ಮೀಸಲಾಗಿ, ಏನೇನೋ ಕುತೂಹಲಗಳು ತುಂಬುವ ಆ ಸಂಧರ್ಭಗಳನ್ನ ವರ್ಣಿಸಲು ಬಹಳ ಕಷ್ಟ ಕಣ್ರೀ. ಬಹುಷಃ ಕಾಳಿದಾಸನಿಂದ  ಮಾತ್ರ ಆಗುತ್ತೋ ಏನೋ.ಏನೇ ಆಗ್ಲಿ ಇದನ್ನೆಲ್ಲಾ ಅನುಭವಿಸೋದು ಪ್ರತಿಯೊಬ್ಬ ಹುಡುಗರ ಆ ಜನ್ಮ ಸಿದ್ಧ ಹಕ್ಕು ಎನ್ನೋದು ನನ್ನ ಭಾವನೆ. ನಂಬಿ, ಹುಡುಗಿಯರಿಗೆ ಹೇಗೆ ಅನ್ನಿಸುತ್ತದೋ ನನಗೆ ತಿಳಿಯದು.

ಮೆಲ್ಲಗೆ ಕೇಳುವಂತೆ ಗಝಲ್ ಅಥವಾ light music ಮೊಳಗುವಂತೆ ಮಾಡಿ, ಕೊನೆಯ ಮೂಲೆಯಲಿ ಹಚ್ಚಿಟ್ಟ ಮೇಣದ ಬತ್ತಿಯ ಬೆಳಕಿನಲ್ಲಿ, ಸ್ನೇಹಿತರೊಡಗೂಡಿ ಒಳಗಿಳಿಸುವ  ಪವಿತ್ರ ತೀರ್ಥ ತಂದುಕೊಡುವ ಆ ಕ್ಷಣದ ನೆಮ್ಮದಿ, ಈ ಜೀವನ ನಶ್ವರ ಅಂಥಾ ಯಾವನ್ರೀ ಹೇಳಿದ್ದು ಎಂದು ಎದೆ ತಟ್ಟಿ ಕೆಳುವಂತಾಗತ್ತೆ. ನಿಜವಾಗಲೂ ನಿಮ್ಮ ನಿಮ್ಮ ದೇವರಾಣೆಗ್ಲೂ ಯಾವ ಪಬ್, ಬಾರ್ಗಳಲ್ಲೂ   ಆ ರೀತಿಯ ಆನಂದ ಸಿಗೋಲ್ಲ ಬಿಡಿ.

ಆದರೆ ಯಾಕೋ ಈಗೀಗ ನಮ್ಮೆಲ್ಲರ ಜೀವನ ನಮ್ಮ ಕೈಮೀರಿ ದಾಟಿದೆ ಎನಿಸುತ್ತಿದೆ. ಕಾಲ ತನ್ನೊಳಗೆ ನಮ್ಮನ್ನೆಲ್ಲಾ ಬಂಧಿಸಿ ಎಲ್ಲಿಗೋ ಕರೆದೊಯ್ಯುತ್ತಿದೆ ಅನ್ನಿಸುತ್ತಿದೆ. ಇತ್ತ ಸ್ವಂತ ಸಂಸ್ಕೃತಿಯನ್ನು ಉಳಿಸಿಕೊಳ್ಳಲಾಗದೇ, ಅತ್ತ ಬೇರೆ ಸಂಸ್ಕೃತಿಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲಾಗದೆ ಎಡಬಿಡಂಗಿ ಅವಸ್ಥೆಯಲ್ಲಿ ಬದುಕು ರೂಪುಗೊಂಡಿದೆಯೇನೋ. ಈ ಹೊಸ ಜೀವನ ಶೈಲಿಗೆ ಎಲ್ಲರೂ ಒಗ್ಗಿಕೊಳ್ಳಬೇಕಾಗಿರುವುದು  ವಿಪರ್ಯಾಸವೇ ಸರಿ.

ಇತ್ತೀಚಿಗೆ ಫೇಸ್ಬುಕ್ನಲ್ಲಿ   ಓದಿದ ನೆನಪು. ಹೀಗಿತ್ತು ಆ ವ್ಯಾಖ್ಯಾನ 'ನಾವು ಮಕ್ಕಳಿದ್ದಾಗ ಯಾವಾಗಲೂ ಅಳುತಿದ್ದೆವು, ಆದರೆ ಮನಸ್ಸಿನ ತುಂಬಾ ಖುಷಿಯಿತ್ತು. ಅಲ್ಲಿ ಮುಗ್ಧತೆ ಹಾಸು ಹೊಕ್ಕಾಗಿತ್ತು. ದೊಡ್ಡವರಾದ ಮೇಲೆ ಹೊರಗಡೆ ಯಾವಾಗಲೂ ನಗುತ್ತಿರುತ್ತೇವೆ, ಆದರೆ ಮನಸ್ಸಿನೊಳಗೆ ದುಃಖ, ಅತೃಪ್ತಿ ತುಂಬಿರುತ್ತದೆ. ಇದು ನೂರಕ್ಕೆ ನೂರು ಪ್ರತಿಶತ ನಿಜ. ಕೊಂಚವೂ ಮುಗ್ಧತೆಯಿಂದ ಕೂಡಿರದ ಮನಸ್ಸು ಈ  ರೀತಿ ಸಣ್ಣ ಸಣ್ಣ ಸಂಗತಿಗಳಲ್ಲಿ ಅಡಗಿರುವ ಖುಷಿಯನ್ನು ಕಳೆದುಕೊಳ್ಳೋದು ಖಂಡಿತ.     

ಕೊನೆಯದಾಗಿ ಒಂದು ಮಾತು, ನಮ್ಮದಾಗಿಸಿಕೊಂಡ ಪ್ರತಿ ಖುಷಿಯ ಕ್ಷಣಗಳಲ್ಲಿ ನೊಂದವರು, ನಿರ್ಗತಿಕರು  ಭಾಗಿಯಾದಲ್ಲಿ, ನಾವು ಅನುಭವಿಸೋ ಪ್ರತಿ ಕ್ಷಣಕ್ಕೂ ನಿಜವಾದ ಅರ್ಥ ಬರಬಹುದು.

ಸೋಮವಾರ, ಜುಲೈ 16, 2012

ಟಿಪ್ಪು Expressನಲ್ಲಿ ನಾನೊಂದಿನ....!!!!!

ಸುಮಾರು 2:30 ರ ಮಧ್ಯಾಹ್ನ ಪ್ಲಾಟ್ ಫಾರ್ಮನಲ್ಲಿ ಕೊಂಡ ನನ್ನ ಇಷ್ಟದ ಚಿತ್ರಾನ್ನದೊಂದಿಗೆ ನಾನು ಹತ್ತಬೇಕಾದ ಟಿಪ್ಪು express ರೈಲಿಗಾಗಿ ಹುಡುಕಾಡಿದೆ. ಹೊಟ್ಟೆ ಹಸಿವಿನಿಂದ ಬಳಲಿದ್ದರೂ, ಭಾರದ ಬ್ಯಾಗ್ ಹೊತ್ತಿದ್ದರೂ ಇದಾವುದೊಂದೂ ಗಣನೆಗೆ ಬಾರದೆ ನನ್ನಿಷ್ಟದ ಊರಿನ ಪಯಣದ ಸವಿ ನನ್ನನ್ನು ಆವರಿಸಿತ್ತು. ಸುಂದರ ಬೆಡಗಿಯರ ಸಂಚಾರಕ್ಕೆ ಆ ಪ್ಲಾಟ್ ಫಾರ್ಮ್ ಹಾಸು ಹಾಸಿತ್ತು. ಮಿತ ಸಂಭಾಷಣೆ ನೆರೆದ ಜನರಲ್ಲಿ ತುಂಬಿತ್ತು. ಗೊಂದಲಗಳಿಲ್ಲದೆ ಪರಿಶುದ್ದ ಮನದ ಜನ ಅವರೆನಿಸಿದರು. ಒಮ್ಮೆಗೆ ನನ್ನ ಗಮನ ಸೆಳೆದ ಆ ಪ್ಲಾಟ್ ಫಾರ್ಮ್ ನಾ ಹತ್ತಬೇಕಾದ ಟಿಪ್ಪು express ನದೇ ಎಂದು ಖಾತ್ರಿಯಾಯಿತು. ಎಷ್ಟೇ ಆಗಲಿ ಆ ಗುಣಗಳೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿಗರಿಗಲ್ಲದೆ ಮತ್ತಾರಿಗೆ ಇರಬೇಕು ಹೇಳಿ..!!!

ಪ್ರಯಾಣದ ವೇಳೆಯಲ್ಲಿ ತಮ್ಮ ಪಕ್ಕದ ಸೀಟ್ಗಳಲ್ಲಿ ಹುಡುಗಿಯರಿಗಾಗಿ ಹಾತೋರೆಯೋದು ಹುಡುಗರ ಸಹಜವಾದ ಅಪೇಕ್ಷೆ. ಇಷ್ಟು ದಿನಗಳಲ್ಲಿ ನನಗೆ ಎಂದಿಗೂ ಆ ಸೌಭಾಗ್ಯ..:) ಸಿಗದಿದ್ದರೂ, ಅದು ಹೇಗೋ ನಾನು ಕಾಯ್ದಿರಿಸಿದ್ದ ಸೀಟ್ನಲ್ಲಿ ಒಂದು ಅಂದದ ಹುಡುಗಿ ಕೂತಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ  ಎಂಬ ಹಳೆ ಗಾದೆಯಂತೆಯೇ ಆಯ್ತು ನೋಡಿ. ನಾನು  ಮೆಲು ಧ್ವನಿಯಲ್ಲಿ 'seat# 107'  ಎಂದೆ ಹುಡುಗಿ ಮೆಲ್ಲಗೆ ಪಕ್ಕಕ್ಕೆ ಸರಿದಳು. ನಾನಂತೂ ಬಹಳ ವಿನಯಪೂರ್ವಕವಾಗಿ ಜಾಗವನ್ನ ಅಲಂಕರಿಸಿದೆ. ಕುಟುಂಬ ಸಮೇತಳಾಗಿ ಪ್ರಯಾಣ ಅನ್ಸತ್ತೆ, ಆಕೆಯ ತಾತ ಅವಳೆದುರಿಗೆ ಕೂತಿದ್ದರು. ನಾನೇನೋ ಅವರ ಆಸ್ತಿ ಪತ್ರಕ್ಕೆ ಸಹಿ ಕೇಳಲು ಬಂದಿರುವನೇನೋ ಎಂಬತ್ತಿತ್ತು ಅವರ ನೋಟ. ಏನಾಯ್ತೋ ಗೊತ್ತಿಲ್ಲಾ ನಾನು wash room ಗೆ ಹೋಗಿ ಬರುವಷ್ಟರಲ್ಲಿ ತಾತ ಮೊಮ್ಮಗಳ ಜಾಗ ಅದಲು ಬದಲಾಗಿತ್ತು. ಎಷ್ಟಾದರೂ ಬಹಳ positive attitude ನವನಾದ ನಾನು ಅದನೆಲ್ಲಾ positive ಆಗೇ ತಗೊಂಡೆ. ಹೋಗ್ಲಿ ತಾತನ ಪರಿಚಯ ಮಾಡಿಕೊಳ್ಳುವ ಎಂದು ಎಲ್ಲಿಗೆ ಪಯಣ?.. ಏನು ಸಮಾಚಾರ ಇತ್ಯಾದಿ ಇತ್ಯಾದಿ ..ಎಲ್ಲಾ ಕೇಳಿದೆ. ಆದ್ರೆ ತಾತ ಮಾತ್ರ ಪರೀಕ್ಷೆಯಲ್ಲಿ ಬರೆಯುವ one word answer ನಂತೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವಕ್ಕಂತೂ ಮಿಲಿಟರಿಯಿಂದ ತಪ್ಪಿಸಿಕೊಂಡು ಬಂದವರಂತೆ ಹ್ಹಾ ...ಇಲ್ಲ.. ಅಷ್ಟೇ!!!!.

ನಾನು ಯಾಕೋ workout ಆಗ್ತಿಲ್ಲ ಎಂದು ಶಿವರಾಮ ಕಾರಂತರ 'ಹುಚ್ಚು ಮನಸಿನ ಹತ್ತು ಮುಖಗಳು' ಎಂಬ ಅವರ ಆತ್ಮಕಥನವನ್ನು ಓದಲು ಮುಂದುವರೆಸಿದೆ. ಕಾರಂತರಿಗಿದ್ದ ಅಭಿರುಚಿಗಳನ್ನು ಸ್ಥೂಲವಾಗಿ ಪರಿಚಯಿಸಿರುವ ಆ ಪುಸ್ತಕವನ್ನು ಓದೋದೇ ಒಂದು ಮಜಾ ಬಿಡಿ. ವೈವಿಧ್ಯಮಯವಾದ ಜೀವನ ನಡೆಸಬೇಕು ಎನ್ನುವವರಿಗೆ ಆ ಪುಸ್ತಕ ಒಂದು ಮಾರ್ಗದರ್ಶಿ.

ಪುಸ್ತಕ ಓದೋ ಭರದಲ್ಲಿ, ಆಗಾಗ್ಗೆ ಹುಡುಗಿಯ ನೋಟಗಳಲ್ಲಿ, ಕಣ್ಮನ ಸೆಳೆಯುವ ಭತ್ತದ ಗದ್ದೆಗಳಲ್ಲಿ, ಹಸಿರಿನಿಂದ ನಳನಳಿಸುತ್ತಿದ್ದ ಕಬ್ಬಿನ ಹೊಲಗಳಲ್ಲಿ, ಬೆಳ್ಳಕ್ಕಿ ಹಾರಟಗಳಲ್ಲಿ, ಕಾವೇರಿ, ಶಿಂಷಾ ಇನ್ನಿತರ ನದಿಗಳ ಹೊಳೆಗಳಲ್ಲಿ ಮುಳುಗಿಹೋಗಿದ್ದ ನನ್ನ ಮನಸ್ಸು, ಬುದ್ದಿಗೆ ಮದ್ದೂರು ಬಂದ್ದದ್ದೆ ಗೊತ್ತಾಗಲಿಲ್ಲ. ಮದ್ದೂರಿಗೆ ಬಂದೂ, ಮದ್ದೂರು ವಡೆ ಸವಿಯದಿದ್ದರೆ ಮನಸ್ಸು ಒಪ್ಪುವುದೇ?.. ಗರಿಗರಿಯಾದ ವಡೆ ತಿನ್ನೋದರಲ್ಲಿ ಮಗ್ನನಾದ ನನ್ನನ್ನು, ತಾತಪ್ಪ ಅವರ ಮೊಮ್ಮಗಳ ಬಾಯಿಂದಲೇ ಕಸಿದೆನೇನೋ ಎಂಬಂತೆ ನೋಡುತಿದ್ದರು.

ಒಂದು ಅಂದಾಜಿನ ಪ್ರಕಾರ ಮೈಸೂರು, ಮಂಡ್ಯ ಸುತ್ತಮುತ್ತಲಿನ ಲಕ್ಷಾಂತರ ಹೆಕ್ಟೇರ್ ಗಳಿಗೆ ಕೃಷ್ಣರಾಜಸಾಗರ ಆಣೆಕಟ್ಟು ನೀರುಣಿಸುತ್ತಿದೆ. ರೈತರು ಸಮೃದ್ಧವಾದ ಜೀವನ ನಡೆಸಲು ಅನುವು ಮಾಡಿಕೊಟ್ಟಿರುವ ಸರ್. ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿ ಪ್ರತಿಬಾರಿ ಮೈಸೂರಿಗೆ ಹೋದಾಗ ನೆನಪಾಗುತ್ತದೆ. ಅವರ ಬುದ್ದಿವಂತಿಕೆ, ಕಾರ್ಯಧಕ್ಷತೆ, ದೂರದೃಷ್ಟಿಗಳನ್ನು ಅರ್ಥಮಾಡಿಕೊಳ್ಳಲು ತಿಣುಕಾಡುವ  ನನ್ನಂಥವನಿಗೆ  ಇಂಜಿನಿಯರ್ ಆಗಿ ನಾನು ಮಾಡುತ್ತಿರುವ ಕೆಲಸ ನೆನೆದು ನಾಚಿಕೆಯಾಯಿತು. ತಕ್ಷಣ ಏನೂ ತೋಚದೆ ಕೈಯಲ್ಲಿ ಉಳಿದಿದ್ದ ವಡೆಯನ್ನು ಬಾಯಿ ಚಪ್ಪರಿಸಿತು.

ಮೈಸೂರು ನಮ್ಮ ಕರ್ನಾಟಕದ ಹೆಮ್ಮೆ, ಸಂಸ್ಕೃತಿಯ ರಾಯಭಾರಿ ಸಂಪ್ರದಾಯಗಳ ಪ್ರತೀಕ. ಹಲವಾರು ಸುಂದರ ನದಿ, ಹೊಳೆ, ಬೆಟ್ಟಗಳಿಂದ, ವೈಭವೋಪೇತ ಅರಮನೆ, ದೇವಸ್ಥಾನ, ದತ್ತ ಕಾಡುಗಳಿಂದ, ವೈವಿಧ್ಯಮಯ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳಿಂದ ಸುತ್ತುವರೆದ ನಾಡು. ಪ್ರತಿಬಾರಿ ಇಲ್ಲಿಗೆ ಬಂದಾಗಲೂ ಮನಸ್ಸಿಗೆ ಬೇರೆಯದೇ ಅನುಭವ ಶಾಂತಿ.
ಕರ್ನಾಟಕ, ಭಾರತ ಅಲ್ಲದೆ ಇಡೀ ವಿಶ್ವಕ್ಕೆ ದಿಗ್ಗಜರನ್ನು ಪರಿಚಯಿಸಿರುವ, ಪರಿಚಯಿಸುತ್ತಿರುವ ಈ ನೆಲ ನಿಜಾರ್ಥದಲ್ಲಿ ಪುಣ್ಯಭೂಮಿಯೇ  ಸರಿ!!!. ಸರಿಯಾಗಿ 5:16 ನಿಮಿಷಕ್ಕೆ ಟಿಪ್ಪು express ಈ ಪುಣ್ಯಭೂಮಿಗೆ ಬಂದು ತಲುಪಿತು. ತಾತಪ್ಪ ಮಾತ್ರ ನಾನೆಲ್ಲಿ ಅವರ ಮೊಮ್ಮಗಳನ್ನ ಅಪಹರಿಸುತ್ತೇನೋ ಎಂಬಂಥಹ ಆತಂಕಕಾರಿ ನೋಟವನ್ನೇ ಬೀರುತ್ತಿದ್ದರು!!!...

ಗುರುವಾರ, ಜೂನ್ 14, 2012

ಚುಟುಕುಗಳು

1).
ನಿನ್ನ ನೆನಪೇ
ನನ್ನ ದಾರಿಗೆ ದೀವಿಗೆ
ನಿನ್ನ ಕಣ್ಣ ಹೊಳಪೇ
ಉರುವಲು ಆ ದೀಪಕೆ

2).
ಅದುಮಿಟ್ಟ ಭಾವನೆಗಳ ಪ್ರಲೋಭನೆ
ಅರಿಯದೆ ಒಡಮೂಡಿದ ಹೊಸ ಕಲ್ಪನೆ
ಪುಳಕಭರಿತ ಕ್ಷಣಗಳ ಆಕರ್ಷಣೆ
ನಿಷ್ಕಲ್ಮಶ ಪ್ರೀತಿಗೆ ಸರ್ವಸ್ವವ ಸಮರ್ಪಣೆ
ನಿಜ ಪ್ರೇಮದ ನಿವೇದನೆಗೆ
ಪ್ರೇಮಿಗಳ ದಿನ ನೀಡಿದೆ ಮನ್ನಣೆ

3).
ಏನೇ ಬರೆಯ ಹೋದರೂ
ನಿನ್ನ ಚಿತ್ರವೇ ಮೂಡಿದೆ
ಏನೇ ನೆನೆಯ ಹೋದರೂ
ನಿನ್ನ ಮುಖವೇ ಎದುರು ನಿಂತಿದೆ
ನನ್ನ ಅರಿವಿನಾಳವನು ಆಳುವ
ಜೀವ ನಿನ್ನದೇನೆ ಅನ್ನಿಸಿದೆ..!!!

4).
ಮನಸಿನ ತುಮುಲಗಳನು ಹೇಳದೆ
ಕೊರಗುವುದೇ ವೇದನೆ
ಮಮ್ಮುಲ ಮರುಗುವ ಬದಲು
ಹೊರಚೆಲ್ಲುವುದೇ ನಿವೇದನೆ
ವೇದನೆ ನಿವೇದನೆಗಳ ಮೀರಿ
ಬೆಳೆಯುವುದೇ ನಿಜವಾದ ಸಾಧನೆ

5).
ಮುಗ್ಧ ಮಾತುಗಳು
ಸ್ಪೂರ್ತಿಯಾಯಿತು ಪದಗಳ ಪೋಣಿಸಲು
ಮಾತಾಡಿದ ಪ್ರತಿ ಕ್ಷಣಗಳು
ಒಟ್ಟುಗೂಡಿಸಿತು ಭಾವನೆಗಳ ಬೆಸೆಯಲು
ಅನಿಸಿದೆ ನೀನೊಂದು ಅದ್ಭುತ ಸೃಷ್ಟಿ
ಅದೋ ಪ್ರೇರೇಪಿಸಿದೆ ಕಾವ್ಯವ ಹೆಣೆಯಲು

6).
ಚದುರಿದ ಮೋಡಗಳು ಒಟ್ಟಾಗುವುದು
ಇಳೆಗೆ ಮಳೆ ತರಲು ತಾನೇ
ಋತುಮಾನಕೆ ತಲೆದೂಗಿ ಎಲೆಗಳುದುರುವುದು
ಹೊಸ ಚಿಗುರು ಬಯಸಿ ತಾನೇ
ಕಲ್ಪನೆಗೆ ನಿಲುಕಿದ ಒಡನಾಡಿ ಸಿಕ್ಕಾಗ
ಮನ ಸೋಲುವುದು ಸಹಜ ತಾನೇ..!!!

7).
ಭಾಷೆ ವಿಶೇಷ ರೂಪ  ತಾಳದು
ಭಾವನೆಗಳು ಬೆಂಬಲಕ್ಕಿಲ್ಲದಿದ್ದರೆ
ಭಾವನೆಗಳು ಬರಹವಾಗವು
ವಿಷಯಗಳು ದೊರಕದಿದ್ದರೆ
ವಿಷಯಗಳು ತಲುಪುವುದೇ ಇಲ್ಲ
ಪಕ್ವ ಅನುಭವವಿರದಿದ್ದರೆ
ಅನುಭವಿಸಿ ಬರೆದ  ಬರಹಕೆ ಬೆಲೆ ಬೆಲೆ ಬಾರದು
ಆನಂದಿಸುವ, ಆಸ್ವಾದಿಸುವ ಮನಸುಗಳಿರದಿದ್ದರೆ..!!!

ಬುಧವಾರ, ಸೆಪ್ಟೆಂಬರ್ 28, 2011

Feel the joy of giving ಎಂದ ಮಹಾನುಭಾವ

ಹೆಚ್ಚೆಂದರೆ ಸಾಮಾನ್ಯರಾದ ನಾವುಗಳು ನೊಂದವರ ಅಭ್ಯದಯಕ್ಕೆ ಏನನ್ನ ನಮ್ಮ ಜೀವನದಲ್ಲಿ ತ್ಯಾಗ ಮಾಡಬಹುದು? ಹೆಚ್ಚಿನ ಜನರ ಕಣ್ಣೆದುರಿಗೆ ಬರುವುದು ನಿರ್ಜೀವ ವಸ್ತುಗಳು ಮಾತ್ರ. ಆದರೆ ಇಡೀ ಜೀವನವನ್ನು ಪರರ ಅಭ್ಯುದಯಕ್ಕಾಗಿ ಮೀಸಲಿಡುವವರು ಕೆಲವರಲ್ಲಿ ಕೆಲವರು ಮಾತ್ರ. ಮತ್ತೊಬ್ಬರ ಒಳ್ಳೆಯದಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿ ಜೀವವನ್ನ ಕಳೆದುಕೊಳ್ಳಬಹುದು ಆದರೆ ಇಡೀ ಜೀವನವನ್ನು ಬೇರೆಯವರಿಗಾಗಿ ಕಳೆಯುವುದು ಕೆಲವು ಮಂದಿಗೆ ಮಾತ್ರ ಸಾಧ್ಯ. ತನ್ನ ಸ್ವಾರ್ಥ, ಆಸೆ, ಆಕಾಂಕ್ಷೆ, ಸ್ವಂತ ಕುಟುಂಬದ ಹಿತಾಸಕ್ತಿಗಳನ್ನು ಬದಿಗಿಟ್ಟು ಮಾನಸಿಕವಾಗಿ ಅಸ್ವಸ್ಥರಾಗಿರುವವರ, ದೈಹಿಕವಾಗಿ ಕುಗ್ಗಿರುವವರ, ಆರ್ಥಿಕವಾಗಿ ನಿರ್ಗತಿಕರಾಗಿರುವವರ, ಸಾಮಾಜಿಕವಾಗಿ ದೂಡಲ್ಪಟ್ಟಿರುವವರ, ಪ್ರಜಾಪ್ರಭುತ್ವದ ದೇಶದಲ್ಲಿ ತಮ್ಮೆಲ್ಲ ಹಕ್ಕುಗಳಿಂದ ವಂಚಿತರಾಗಿರುವವರ ಉನ್ನತಿಕರಣಕ್ಕೆ ಕಳೆದ ೮ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಮಧುರೈನ ನಾರಾಯಣನ್ ಕೃಷ್ಣನ್ ಎಂಬ ಮಹಾನುಭಾವ..!!

ಆರ್ಥಿಕವಾಗಿ ಅಷ್ಟೇನೂ ಶ್ರೀಮಂತರಲ್ಲದ ಒಂದು ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಬಾಣಸಿಗನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣನ್ ಗೆ ವಿದೇಶದಲ್ಲಿ ಕೆಲಸದ ಆಹ್ವಾನ ಬರುತ್ತದೆ. ಎಲ್ಲ ರೀತಿಯಲ್ಲೂ ಸನ್ನದ್ಧರಾಗಿ ಹೊರಡುವ ಸಂದರ್ಭದಲ್ಲಿ ಆಕಸ್ಮಾತಾಗಿ ಕಣ್ಣಿಗೆ ಬೀಳುವ ದೃಶ್ಯ ಅವರ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಮಾನಸಿಕ ಅಸ್ವಸ್ಥನಾಗಿರುವ ಒಬ್ಬ ವ್ಯಕ್ತಿ ತನ್ನ ಮಲವನ್ನ ತಾನೇ ತಿನ್ನುತ್ತಿದ್ದ ದೃಶ್ಯ ಅವರ ಕಣ್ಣಿಗೆ ಬೀಳುತ್ತದೆ. ತಕ್ಷಣ ಪಕ್ಕದ ಹೋಟೆಲ್ ನಿಂದ ಇಡ್ಲಿ ಕಟ್ಟಿಸಿಕೊಂಡು ಬಂದು ಆತನ ಕೈಗಿಡುತ್ತಾರೆ. ಅವರು ಹೇಳುವ ಪ್ರಕಾರ ಅಷ್ಟು ವೇಗವಾಗಿ ಒಬ್ಬ ಮನುಷ್ಯ ಊಟ ಮಾಡಿದ್ದನ್ನ ಅವರೆಂದಿಗೂ ಕಂಡಿರಲಿಲ್ಲವಂತೆ. ಊಟ ಮುಗಿಸಿದಾತ ಹೊಟ್ಟೆ ತುಂಬಿಸಿದಾತನಿಗೆ ಧನ್ಯವಾದ ಅರ್ಪಿಸುವ ರೀತಿಯಲ್ಲಿ ಕೃಷ್ಣನ್ ರ ಕೈ ಹಿಡಿಯುತ್ತಾನೆ. ಆತನ ಕೃತಜ್ಞತಾಪೂರ್ವಕ ಸ್ಪರ್ಶ ಕೃಷ್ಣನ್ ರಿಗೆ ಅದ್ಭುತ ಅನುಭವವನ್ನ ನೀಡುತ್ತದೆ. ಯಾವ ಸಕಲ ಅಷ್ಟ ಐಶ್ವರ್ಯಗಳೂ ನೀಡದ ತೃಪ್ತಿ ನೀಡುತ್ತದೆ. ಮನಸ್ಸಿಗೆ ಸುಖ ನೆಮ್ಮದಿಯನ್ನ ನೀಡುತ್ತದೆ. ಅಂದಿನ ಅವರ ಅನುಭವ ತಮ್ಮ ಇಡೀ ಜೀವನವನ್ನ ಬಹಳ ಅರ್ಥಪೂರ್ಣವಾಗಿ ಕಳೆಯಲು ಪ್ರೇರೇಪಿಸುತ್ತದೆ.

ಸುಮಾರು ೮ ವರ್ಷಗಳ ಹಿಂದೆ ಆರಂಭವಾದ ಕೃಷ್ಣನ್ ರ ಅಕ್ಷಯ ಟ್ರಸ್ಟ್ ೧.೭ ಮಿಲಿಯನ್ನಷ್ಟು ಊಟವನ್ನ ನಿರ್ಗತಿಕರಿರುವೆಡೆಗೆ ತಲುಪಿಸಿದೆ. ತಮ್ಮ ಮನೆಯೇ ಅಧಿಕೃತ ಕಾರ್ಯಾಲಯವಾಗಿದೆ, ಅಡುಗೆಮನೆಯಾಗಿದೆ. ಅವರದೇ ಸ್ವಂತ ದುಡ್ಡಿನಿಂದ ಪ್ರತಿದಿನ ಅಡುಗೆ ಮಾಡಿ ತಮ್ಮ ವ್ಯಾನ್ ನಲ್ಲಿ ಇಟ್ಟುಕೊಂಡು ಮಾನಸಿಕ ಅಸ್ವಸ್ಥರನ್ನ ಹುಡುಕಿ, ಊಟ ಮಾಡಿಸಿ ಬರುವುದು ವಾಡಿಕೆಯಾಗಿದೆ. ಅಷ್ಟೇ ಅಲ್ಲದೆ ಅವರಿಗೆ ಸ್ನಾನ ಮಾಡಿಸುವುದು, ಹೇರ್ ಕಟ್ ಮಾಡುವುದು, ಊಟ ತಿನ್ನಿಸುವುದು ಎಲ್ಲವನ್ನೂ ತಾಯಿ ಮಕ್ಕಳಿಗೆ ಮಾಡುವಷ್ಟು ಪ್ರೀತಿ, ಅಕ್ಕರೆ, ಕಾಳಜಿಯಿಂದ ಮಾಡುತ್ತಾ ಬಂದಿದ್ದಾರೆ. ಎಷ್ಟೋ ಬಾರಿ ಮಾನಸಿಕ ಅಸ್ವಸ್ಥರಿಂದ ಒದೆ ತಿಂದದ್ದು ಉಂಟು.

ಸತತ ೮ ವರ್ಷಗಳಿಂದ ವಿಶ್ರಮಿಸದೆ ದುಡಿಯುತ್ತಿರುವ ಕೃಷ್ಣನ್ ಇಂದು ಅಕ್ಷಯ ಟ್ರಸ್ಟ್ ನ್ನು ಬೃಹದಾಕಾರವಾಗಿ ಬೆಳೆಸಿದ್ದಾರೆ. ನಿಸ್ವಾರ್ಥ ದಾನಿಗಳಿಂದ ಹಣ ಸಂಗ್ರಹಿಸಿ ನಿರ್ಗತಿಕರಿಗೆ ವಸತಿ ಕಲ್ಪಿಸುವ ಮಹತ್ತರ ಯೋಜನೆಯನ್ನು ಯಶಸ್ವಿಯಾಗಿ ಮುಗಿಸುವ ಹಂತಕ್ಕೆ ತಲುಪಿದ್ದಾರೆ. ಸುಮಾರು ೪೦೦ ಮಾನಸಿಕ ರೋಗಿಗಳಿಗೆ ಉಳಿಯಲು ಜಾಗ, ಶುಶ್ರೂಷೆಗೆ ಆಸ್ಪತ್ರೆ, ಸುಸಜ್ಜಿತ ಊಟದ ಶಾಲೆಗಳನ್ನೊಳಗೊಂಡ ಬೃಹತ್ ಕಟ್ಟಡವನ್ನು ಮುಗಿಸುವ ಹಂತದಲ್ಲಿದ್ದಾರೆ.

ಉತ್ತಮ ವಿದ್ಯಾವಂತನಾಗಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಎಲ್ಲರಿಂದ ದೂಷಿಸಲ್ಪಡುವ ಮಾನಸಿಕ ರೋಗಿಗಳ ಸೇವೆಗೆ ಕೃಷ್ಣನ್ ಪಣ ತೊಟ್ಟಿದ್ದಾರೆ. ಇಂದು ಇಡೀ ಜಗತ್ತಿನಲ್ಲಿ ಲಕ್ಷಾಂತರ NGO ಗಳು ಕಾರ್ಯನಿರ್ವಹಿಸುತ್ತಿವೆ. ಬಡವರ, ನಿರ್ಗತಿಕರ, ರೋಗಿಗಳ ಅಭ್ಯುದಯವೇ ನಮ್ಮ ಮೂಲ ಉದ್ದೇಶ ಎಂಬ ಹಣೆಪಟ್ಟಿಯೊಂದಿಗೆ ಸುಲಿಗೆ ಮಾಡುತ್ತಿವೆ. ಸರಕಾರದಿಂದ ಜಾರಿಯಾಗುವಂತಹ ಪ್ರಾಜೆಕ್ಟ್ ಗಳನ್ನ ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಪಡೆದುಕೊಂಡ ಹಣದ ದುರ್ಬಳಕೆ ಮಾಡುತ್ತಿದ್ದಾರೆ. ಎಷ್ಟೋ NGO ಗಳು ಖಾಸಗಿ ಕಂಪನಿಗಳಲ್ಲಿ, ಸರಕಾರೀ ಕಛೇರಿಗಳಲ್ಲಿ ಕೆಲಸ ಮಾಡುವ ನೌಕರರಿಂದಲೂ ತಿಂಗಳಿಗೆ ಇಂತಿಷ್ಟು ಹಣ ಎಂದು ವಸೂಲಿ ಮಾಡುತ್ತಾರೆಯೇ ಹೊರತು ಅದರ ಸದ್ವಿನಿಯೋಗ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ (ನನಗೂ ಹಾಗೂ ನನ್ನ ಸ್ನೇಹಿತರಿಗೂ ಆದ ಅನುಭವದ ಆಧಾರದ ಮೇಲೆ). NGO ಗಳು ದಾನದ ರೂಪದಲ್ಲಿ ಗಳಿಸುವ ಹಣದ ಲೆಕ್ಕ ಯಾರಿಗೂ ಕೊಡಬೇಕಾದ ಅವಶ್ಯಕತೆ ಇಲ್ಲದಿರುವುದನ್ನು ದುರುಪಯೋಗ ಮಾಡಿಕೊಂಡು ದೊಡ್ಡ ದಂಧೆ ಮಾಡುತ್ತಿದ್ದಾರೆ. ಇಂತಹ NGO ಗಳ ಮುಂದೆ ಕೃಷ್ಣನ್ ರ ಅಕ್ಷಯ ಟ್ರಸ್ಟ್ ಅಪವಾದವಾಗಿ ನಿಲ್ಲುತ್ತದೆ.

CNN IBN ನಡೆಸಿದ Top Ten Real Heroes ಕಾರ್ಯಕ್ರಮದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದ ಲಕ್ಷಾಂತರ ಜನರ ನಡುವೆ ಸ್ಪರ್ಧಿಸಿ ಕೃಷ್ಣನ್ Top Ten Real Hero ಆಗಿ ಹೊರ ಹೊಮ್ಮಿದ್ದಾರೆ. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಆಮೀರ್ ಖಾನ್ ಕೃಷ್ಣನ್ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಗೌರವಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಹದಗೆಟ್ಟರೆ ಅದಕ್ಕೆ ಬೇರೆಯವರು ಕಾರಣರಲ್ಲ. ಕಾರಣಕರ್ತರು ನಾವೇ. ಉತ್ತಮ ಶಿಕ್ಷಣ ಪಡೆದು ಸಾರ್ವಜನಿಕವಾಗಿ ವಿದ್ಯಾವಂತರೆನಿಸಿಕೊಂಡರಷ್ಟೇ  ಸಾಲದು, ನಮ್ಮ ನಮ್ಮ ಕರ್ತವ್ಯಗಳನ್ನರಿತು ಅದನ್ನು ಪಾಲಿಸಬೇಕಾಗಿದೆ. ಕೃಷ್ಣನ್ ರಂತೆ ಸಾಕಷ್ಟು ಜನ ಟ್ರಸ್ಟ್ ಗಳನ್ನ ನಡೆಸುತ್ತಿದ್ದಾರೆ. ಅಂತಹವರಿಗೆ ನಾವೆಲ್ಲಾ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಆಗ ಮಾತ್ರ ಸ್ವಾಸ್ಥ್ಯಭರಿತ ಪರಿಸರದ ನಿರ್ಮಾಣ ಸಾಧ್ಯ.

ಕೃಷ್ಣನ್ ಒಬ್ಬ ಬ್ರಾಹ್ಮಣರು, ವಿದ್ಯಾವಂತರು ಮೇಲಾಗಿ ಉತ್ತಮ ಮನಸ್ಸುಳ್ಳವರು. ಆದರೆ ಅವರು ಸಮಾಜ ಸೇವೆಯಲ್ಲಿ ತೊಡಗಿರುವುದೇ ಅವರಿಗೆ ಮುಳ್ಳಾಗಿ  ಪರಿಣಮಿಸಿದೆ. ಅವರ ಕೆಲಸ ನಮಗೆಲ್ಲಾ ಆದರ್ಶವಾಗಿ ಕಾಣುತ್ತಿದೆ. ಆದರೆ ಅವರನ್ನು ವರಿಸಲು ಒಬ್ಬ ಮಹಿಳೆಯೂ ಮುಂದೆ ಬಂದಿಲ್ಲ. ಆತ ಮಾಡುವ ಕೆಲಸಗಳಿಗೆ ನಾನು ಬೆಂಬಲ ಕೊಡುತ್ತೇನೆ ಎಂಬ ಮನಸು ಸಿಕ್ಕಿಲ್ಲ. ಯಾವುದೇ ವ್ಯಕ್ತಿ ಆತ ಗಂಡಾಗಲಿ, ಹೆಣ್ಣಾಗಲಿ ಆಸರೆಯೆಂಬುದು ಬೇಕಾಗುತ್ತದೆ. ಆಸ್ಥೆಯಿಂದ ಪ್ರೀತಿಸುವವರು ಬೇಕಾಗುತ್ತಾರೆ. ಜೀವನದ ಪಯಣದಲ್ಲಿ ಒಂದಲ್ಲ ಒಂದು ದಿನ ಒಂಟಿತನ ಕಾಡುತ್ತದೆ. ಕೊನೆಗೊಂದು ದಿನ ಜೀವನವೇ ಬೇಡವೆನಿಸುತ್ತದೆ. ಅಂತಹ ಮಾನಸಿಕ ಖಿನ್ನತೆಗೆ ಮನಸ್ಸು ಬಲಿಯಾಗಬಾರದೆಂದರೆ ಒಬ್ಬ ಸಂಗಾತಿ ಬೇಕಾಗುತ್ತದೆ.

ಮದರ್ ತೆರೇಸಾ ಕುಷ್ಟ ರೋಗಿಗಳನ್ನು ಪಾಲಿಸಿ, ಪೋಷಿಸಿ ತಮ್ಮ ಆಯುಷ್ಯವನ್ನೆಲ್ಲಾ ಅವರಿಗಾಗಿ ಮೀಸಲಿಟ್ಟಿದ್ದರು ಎಂಬುದನ್ನು ಕೇಳಿದ್ದೆವು. ಇಲ್ಲೊಬ್ಬ, ಮಾನಸಿಕ ಅಸ್ವಸ್ಥರ ಶ್ರೇಯೋಭಿವೃದ್ದಿಗೆ ಇಡೀ ಜೀವನವನ್ನು ಮುಡಿಪಿಟ್ಟುರುವುದನ್ನು ನೋಡುವ ಭಾಗ್ಯ ನಮ್ಮದಾಗಿದೆ.

ವಿಜಯಕರ್ನಾಟಕ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ವಿಶ್ವೇಶರ ಭಟ್ ಕೃಷ್ಣನ್ ರನ್ನು ಕುರಿತು 'ಮಧುರೈನ ಸಂತೆಯೊಳಗೊಬ್ಬ ಸಂತ' ಎಂಬ ಲೇಖನ ಬರೆದ್ದಿದ್ದರು. ಆ ಲೇಖನವೇ ನನ್ನೀ ಲೇಖನಕ್ಕೆ ಸ್ಫೂರ್ತಿ. ಕೃಷ್ಣನ್ ರ ಸಮಾಜಸೇವೆಗೆ ಈ ಲೇಖನದ ಓದುಗರು ಸಹಾಯಮಾಡಲೆಂಬ  ವಿನಂತಿಯೊಂದಿಗೆ, ಅವರ ಅಕ್ಷಯ ಟ್ರಸ್ಟ್ ನಿರ್ಗತಿಕರಿಗೆ, ಬಡವರಿಗೆ, ನೊಂದವರಿಗೆ ಅಕ್ಷಯ ಪಾತ್ರೆಯಾಗಲೆಂಬುದು ಈ ಲೇಖನದ ಆಶಯ. 

ಅಕ್ಷಯ ಟ್ರಸ್ಟ್ ವೆಬ್ ವಿಳಾಸ : http://www.akshayatrust.org/